Politics

ಹೊಳೆನರಸೀಪುರ: ದಲಿತ ಬಡಾವಣೆಗಳ ಸ್ವಚ್ಛತೆ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳ ಆಕ್ರೋಶ

ಪುರಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಸ್ವಚ್ಛತೆ ಬಗ್ಗೆ ಮೌನ ವಹಿಸಿದ ಆಡಳಿತ

avatar
ಸಿಬ್ಬಂದಿ ವರದಿ
ಸೆಪ್ಟೆಂ 22,2026 · 1 ನಿಮಿಷ ಓದು
ಫೋಟೋ

ಹೊಳೆನರಸೀಪುರ: ಪಟ್ಟಣದ ಪುರಸಭೆಯ ಸ್ವಚ್ಛತೆ ನಿರ್ಲಕ್ಷ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಕೊಳಚೆ ಪ್ರದೇಶ ಎಂದು ಘೋಷಣೆಯಾಗಿರುವ ಬಿ.ಆರ್. ಅಂಬೇಡ್ಕರ್ ನಗರ, ಸಿದ್ಧಾರ್ಥ ನಗರ ಸೇರಿದಂತೆ ಬಹುತೇಕ ದಲಿತರು ವಾಸಿಸುತ್ತಿರುವ ಬಡಾವಣೆಗಳು ಸ್ವಚ್ಛತೆಯಿಂದ ಬಹುದೂರ ಉಳಿದಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.

ಸ್ವಚ್ಛತೆ ಕಡೆ ಗಮನಹರಿಸಿ ಪಟ್ಟಣವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಕಾಳಜಿ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಎಷ್ಟೇ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ. ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಪುರಸಭೆ ಮುಖ್ಯಾಧಿಕಾರಿಯವರ ಮಾತಿಗೆ ಮನ್ನಣೆ ಕೊಡದಿರುವುದೇ ಸ್ವಚ್ಛತೆ ಮರೀಚಿಕೆಯಾಗಿ ಉಳಿದಿರುವುದಕ್ಕೆ ಪ್ರಮುಖ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸ್ವಚ್ಛ ಭಾರತ್ ಅಭಿಯಾನ ವತಿಯಿಂದ ಪಟ್ಟಣಕ್ಕೆ ಪ್ರಶಸ್ತಿ ಬಂದಿರುವುದೇ ಪಟ್ಟಣಿಗರ ದುರಂತ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಬಡಾವಣೆಗಳ ಪ್ರಮುಖರು ಹಾಗೂ ಸಾಮಾಜಿಕ ಕಳಕಳಿ ಉಳ್ಳವರು ಆಗಾಗ ಸ್ವಚ್ಛತೆ ಬಗ್ಗೆ ಪುರಸಭೆಯವರ ಗಮನ ಸೆಳೆದರೂ ಕಿಂಚಿತ್ತೂ ಪ್ರಯೋಜನವಾಗುತ್ತಿಲ್ಲ.

ಪುರಸಭೆ ಚುನಾವಣೆ ಸಮೀಪಿಸುತ್ತಿದ್ದು, ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಮತ ಕೇಳಲು ಹೋಗಬೇಕೋ ಎಂಬ ಚಿಂತೆ ಆಯಾ ಬಡಾವಣೆಗಳ ಮುಖಂಡರುಗಳನ್ನು ಕಾಡತೊಡಗಿದೆ. ವಾಸ್ತವ ಸ್ಥಿತಿ ಗೊತ್ತಿದ್ದರೂ ಪುರಸಭೆಯವರು ಮೌನಕ್ಕೆ ಶರಣಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ ಎಂದು ನಿವಾಸಿಗಳು ದೂರಿದ್ದಾರೆ.