ಅನುದಾನರಹಿತ ಖಾಸಗಿ ಶಾಲೆಗಳ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಇಲಾಖೆಗೆ ತಕ್ಷಣ ಕ್ರಮಕ್ಕೆ ಆಗ್ರಹ
ಶಿಕ್ಷಣ ಸಚಿವರು ಒಪ್ಪಿರುವ ವಿಶೇಷ ಸದನ ಸಮಿತಿ ಮಧ್ಯಂತರ ವರದಿ ಜಾರಿಗೆ ಒಕ್ಕೂಟ ಆಗ್ರಹ
ಹಾಸನ: ಅನುದಾನರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳು ಹಲವು ವರ್ಷಗಳಿಂದ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಸದನ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯ ಆಧಾರದ ಮೇಲೆ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಾಸನ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಒತ್ತಾಯಿಸಿದೆ.
ಶಿಕ್ಷಕರ ದಿನಾಚರಣೆಯಂದು ರಾಜ್ಯದ ಎಲ್ಲ ಶಿಕ್ಷಕರ ಹೆಸರಿನ ಮುಂದೆ ಗೌರವಪೂರ್ವಕವಾಗಿ 'TR' ಎಂದು ಬಳಸಲು ಅವಕಾಶ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಒಕ್ಕೂಟ ಸ್ವಾಗತಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕೆಎಎಂಎಸ್ ಸಂಘಟನೆಯ ಮೂಲಕ ಅಭಿನಂದನೆ ಸಲ್ಲಿಸಿದೆ. ಇದೇ ವೇಳೆ ಭಾರತೀಯ ಶಿಕ್ಷಣ ಮಂಡಳಿ ಸೊಸೈಟಿಗೆ ವಿಶಿಷ್ಟ ಸದಸ್ಯರಾಗಿ ನೇಮಕಗೊಂಡಿರುವ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರನ್ನೂ ಒಕ್ಕೂಟದ ವತಿಯಿಂದ ಅಭಿನಂದಿಸಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಣ ಸಚಿವರ ಸೂಚನೆಯ ಮೇರೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಎಎಂಎಸ್ ಗೌರವಾಧ್ಯಕ್ಷ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸದನ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ನಿರಾಣಿ ಹಣಮಂತ ರುದ್ರಪ್ಪ, ಎಸ್.ಎಲ್. ಭೋಜೇಗೌಡ, ಬಲ್ಲೀಸ್ ಬಾನು, ರಾಮೋಜಿಗೌಡ, ಡಿ.ಟಿ. ಶ್ರೀನಿವಾಸ್ ಹಾಗೂ ಕೆ. ವಿವೇಕಾನಂದ ಸೇರಿದಂತೆ ಸದಸ್ಯರಿದ್ದು, ಹಲವು ವಿಚಾರಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.
ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ನಿಯಮಗಳನ್ನು ಸರಳೀಕರಿಸುವ ಕುರಿತು ಸದನ ಸಮಿತಿ ಪರಿಶೀಲನೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದೆ. ಶಿಕ್ಷಣ ಸಚಿವರು ವರದಿಯನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಆದೇಶಗಳನ್ನು ಹೊರಡಿಸಿ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಲು ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

