54 ವರ್ಷವಾದರೂ ಹೇಮಾವತಿ ಜಲಾಶಯ ಸಂತ್ರಸ್ತರಿಗೆ ಭೂಮಿ ಭಾಗ್ಯವಿಲ್ಲ
8,273 ರೈತ ಕುಟುಂಬಗಳಿಗೆ 1972ರಲ್ಲಿ ಭೂಮಿ ಮಂಜೂರು; ಇನ್ನೂ ಪೋಡಿ ಕಾರ್ಯ ಪೂರ್ಣಗೊಂಡಿಲ್ಲ

ಹಾಸನ: ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ 1972ರಲ್ಲಿಯೇ ಪರ್ಯಾಯ ಜಮೀನು ಮಂಜೂರು ಮಾಡಿದ್ದರೂ, 54 ವರ್ಷಗಳು ಕಳೆದರೂ ಪೋಡಿ ಕಾರ್ಯ ಪೂರ್ಣಗೊಳ್ಳದೆ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯ 8,273 ರೈತ ಕುಟುಂಬಗಳಿಗೆ ಸಾಗುವಳಿ ಚೀಟಿ ಹಾಗೂ ಪಹಣಿ ನೀಡಲಾಗಿದ್ದು, ಅಂದೇ ಪೋಡಿಗಾಗಿ ಶುಲ್ಕವನ್ನೂ ಪಾವತಿಸಿಕೊಳ್ಳಲಾಗಿತ್ತು. ಆದರೆ ಐದು ದಶಕಗಳೇ ಕಳೆದರೂ ಪೋಡಿ ಕಾರ್ಯ ನಡೆಯದೆ ಸುಮಾರು 40 ಗ್ರಾಮಗಳ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿಯ ಗೌರವಾಧ್ಯಕ್ಷರು ತಿಳಿಸಿದ್ದಾರೆ.
ಇದುವರೆಗೆ ಹಲವು ಸರ್ಕಾರಗಳು ಅಧಿಕಾರಕ್ಕೆ ಬಂದು ಹೋಗಿದ್ದರೂ, ಹಲವು ಅಧಿಕಾರಿಗಳು ಬದಲಾಗಿದ್ದರೂ ಸಮಸ್ಯೆಗೆ ಇದುವರೆಗೂ ಸೂಕ್ತ ಪರಿಹಾರ ದೊರೆತಿಲ್ಲ. ನೂತನ ಜಿಲ್ಲಾ ಉಸ್ತುವಾರಿ ಸಚಿವರು ಆರು ತಿಂಗಳ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನಾರು ತಿಂಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂತ್ರಸ್ತರ ಸಮಿತಿ ಎಚ್ಚರಿಕೆ ನೀಡಿದೆ.
