ಶ್ರವಣಬೆಳಗೊಳ: ತೀರ್ಥಂಕರರಿಗೆ ವಿಶೇಷ ಕಲ್ಪದ್ರುಮ ಮಹಾಭಿಷೇಕ
ಭವ್ಯಚೂಡಾಮಣಿ ಭಂಡಾರಿ ಬಸದಿಯಲ್ಲಿ ಚತುರ್ವಿಂಶತಿ ತೀರ್ಥಂಕರರಿಗೆ ಅಭಿಷೇಕ, ಭಕ್ತರ ದಂಡು
ಶ್ರವಣಬೆಳಗೊಳ: ದಶಲಕ್ಷಣ ಪರ್ವದ ಅಂಗವಾಗಿ ಇಲ್ಲಿನ ಭವ್ಯಚೂಡಾಮಣಿ ಭಂಡಾರಿ ಬಸದಿಯ ಚತುರ್ವಿಂಶತಿ ತೀರ್ಥಂಕರರಿಗೆ ವಿಶೇಷ ಕಲ್ಪದ್ರುಮ ಮಹಾಭಿಷೇಕ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿತು.
ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಬುಧವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಬೆಳಗ್ಗೆಯಿಂದಲೇ ಬಸದಿಯಲ್ಲಿ ವಿವಿಧ ಪೂಜಾ ವಿಧಿವಿಧಾನಗಳ ಮೂಲಕ ತೀರ್ಥಂಕರರಿಗೆ ವಿಶೇಷ ಆರಾಧನೆ ಸಲ್ಲಿಸಲಾಯಿತು. ಕಲ್ಪದ್ರುಮ ಮಹಾಭಿಷೇಕದ ಅಂಗವಾಗಿ ವಿವಿಧ ದ್ರವ್ಯಗಳನ್ನು ಬಳಸಿಕೊಂಡು 24 ತೀರ್ಥಂಕರರ ಮೂರ್ತಿಗಳಿಗೆ ಕ್ರಮಬದ್ಧವಾಗಿ ಅಭಿಷೇಕ ನೆರವೇರಿಸಲಾಯಿತು.
ಮಧ್ಯಾಹ್ನ ಹುಳ್ಳ ಮಂಟಪದಲ್ಲಿ ಅರಿಹಂತ ಪರಮೇಷ್ಠಿಗಳ ಹಾಗೂ ಮಾತೆ ಜಿನವಾಣಿ ಅಷ್ಟವಿಧಾರ್ಚನೆ ಪೂಜೆ, ತತ್ವಾರ್ಥ ಸೂತ್ರ ವಾಚನ ಮತ್ತು ಅರ್ಥ ವಿವರಣೆ ಹಾಗೂ ಪೂಜ್ಯ ತ್ಯಾಗಿಗಳಿಂದ ಪ್ರವಚನ ನೆರವೇರಿತು. ಸಂಜೆ ಧಾರ್ಮಿಕ ಪ್ರಶ್ನೋತ್ತರ ಹಾಗೂ ಸಂಗೀತಮಯ ಆರತಿ ಕಾರ್ಯಕ್ರಮಗಳು ಸಂಪನ್ನಗೊಂಡವು.
ಕಾರ್ಯಕ್ರಮದಲ್ಲಿ ಮುನಿಶ್ರೀ ಸುದೇಯಸಾಗರ ಮಹಾರಾಜರು, ಮುನಿಶ್ರೀ ಪ್ರಭಾಕರಸಾಗರ ಮಹಾರಾಜರು ಹಾಗೂ ಆರ್ಯಿಕಾಶ್ರೀ ಶಿವಮತಿ ಮಾತಾಜಿ ಸೇರಿದಂತೆ ಹಲವು ಸಾಧು-ಸಂತರು ಪಾವನ ಸಾನಿಧ್ಯ ವಹಿಸಿದ್ದರು. ಬೆಂಗಳೂರಿನ ಅಜಯ್ ಕುಮಾರ್ ಜೈನ್ ಹಾಗೂ ಪುಷ್ಪದೇವಿ ಪವನ್ ಕುಮಾರ್ ಪಾಟ್ನಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಮಹಾಭಿಷೇಕದಲ್ಲಿ ಭಾಗವಹಿಸಿದರು.



