ಅ.4ರಂದು 'ಅಕ್ಷರ ಪುರಸ್ಕಾರ-2026': ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್ಎಸ್ಎಲ್‌ಸಿ, ಪಿಯುಸಿ ಸಾಧಕರಿಗೆ ಪುಸ್ತಕ ರೂಪದ ಬಹುಮಾನ; ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನ

ಹಾಸನ: ಅಕ್ಷರ ಬುಕ್ ಹೌಸ್ ಹಾಗೂ ಹಾಸನ ರೋಟರಿ ಕ್ಲಬ್ ವತಿಯಿಂದ ಜಿಲ್ಲೆಯ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಕ್ಟೋಬರ್ 4ರಂದು 'ಅಕ್ಷರ ಪುರಸ್ಕಾರ-2026' ಕಾರ್ಯಕ್ರಮ ಆಯೋಜಿಸಲಾಗಿದೆ.
ಕಳೆದ 10 ವರ್ಷಗಳಿಂದ ಹಾಸನದಲ್ಲಿ ಓದುಗರಿಗೆ, ಸಾಹಿತ್ಯಾಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಓದಿನ ಸವಿಯನ್ನು ಪರಿಚಯಿಸುತ್ತಿರುವ ಅಕ್ಷರ ಬುಕ್ ಹೌಸ್, ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಪುರಸ್ಕಾರ ನೀಡುತ್ತಾ ಬಂದಿದೆ. ಶಾಲೆ, ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ, ಖಾಸಗಿ ಸಂಸ್ಥೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕನ್ನಡ ಅಥವಾ ಇಂಗ್ಲಿಷ್ ಯಾವುದೇ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೂ ಅವಕಾಶವಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ವಿದ್ಯಾರ್ಥಿಯೇ ಖುದ್ದಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಪುರಸ್ಕಾರ ಸ್ವೀಕರಿಸಲು ಸಹ ವಿದ್ಯಾರ್ಥಿಗಳೇ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದು ಆಯೋಜಕರು ತಿಳಿಸಿದ್ದಾರೆ.


